Add parallel Print Page Options

ಸುಂಕದವನು

(ಮಾರ್ಕ 2:13-17; ಲೂಕ 5:27-32)

ಯೇಸು ಹೋಗುತ್ತಿರುವಾಗ, ಮತ್ತಾಯ ಎಂಬ ವ್ಯಕ್ತಿಯನ್ನು ಕಂಡನು. ಮತ್ತಾಯನು ಸುಂಕದಕಟ್ಟೆಯಲ್ಲಿ ಕುಳಿತಿದ್ದನು. ಯೇಸು ಅವನಿಗೆ, “ನನ್ನನ್ನು ಹಿಂಬಾಲಿಸು” ಅಂದನು. ಆಗ ಮತ್ತಾಯನು ಎದ್ದು ಯೇಸುವನ್ನು ಹಿಂಬಾಲಿಸಿದನು.

10 ಯೇಸು ಮತ್ತಾಯನ ಮನೆಯಲ್ಲಿ ಊಟಕ್ಕೆ ಕುಳಿತುಕೊಂಡನು. ಅನೇಕ ಮಂದಿ ಸುಂಕವಸೂಲಿಗಾರರು ಮತ್ತು ಕೆಟ್ಟ ಜನರು ಸಹ ಯೇಸುವಿನ ಸಂಗಡ ಮತ್ತು ಆತನ ಹಿಂಬಾಲಕರ ಸಂಗಡ ಊಟಕ್ಕೆ ಕುಳಿತುಕೊಂಡರು. 11 ಇದನ್ನು ಕಂಡ ಫರಿಸಾಯರು ಯೇಸುವಿನ ಶಿಷ್ಯರಿಗೆ, “ನಿಮ್ಮ ಬೋಧಕನು ಸುಂಕವಸೂಲಿಗಾರರೊಂದಿಗೆ ಮತ್ತು ಕೆಟ್ಟ ಜನರೊಂದಿಗೆ ಏಕೆ ಊಟಮಾಡುತ್ತಾನೆ?” ಎಂದು ಕೇಳಿದರು.

12 ಫರಿಸಾಯರು ಹೇಳಿದ್ದನ್ನು ಕೇಳಿಸಿಕೊಂಡ ಯೇಸು ಅವರಿಗೆ, “ಆರೋಗ್ಯವುಳ್ಳ ಜನರಿಗೆ ವೈದ್ಯನ ಅವಶ್ಯಕತೆಯಿಲ್ಲ. ಕಾಯಿಲೆಯ ಜನರಿಗೆ ವೈದ್ಯನು ಅವಶ್ಯ. 13 ನೀವು ಹೋಗಿ, ‘ನನಗೆ ಯಜ್ಞ ಬೇಡ, ದಯೆ ಬೇಕು’(A) ಎಂದು ಪವಿತ್ರ ಗ್ರಂಥದಲ್ಲಿ ಬರೆದಿರುವ ವಾಕ್ಯದ ಅರ್ಥವನ್ನು ಕಲಿತುಕೊಳ್ಳಿ. ನಾನು ನೀತಿವಂತರನ್ನು ಕರೆಯಲು ಬರಲಿಲ್ಲ, ಪಾಪಿಗಳನ್ನು ಕರೆಯಲು ಬಂದೆನು” ಎಂದು ಹೇಳಿದನು.

Read full chapter