Add parallel Print Page Options

ಯೇಸು ಸ್ವಂತ ನಾಡಿಗೆ ಬಂದದ್ದು

(ಮತ್ತಾಯ 13:53-58; ಮಾರ್ಕ 6:1-6)

16 ಯೇಸು ತಾನು ಬೆಳೆದ ನಜರೇತ್ ಎಂಬ ಊರಿಗೆ ಪ್ರಯಾಣ ಮಾಡಿದನು. ವಾಡಿಕೆಯ ಪ್ರಕಾರ, ಆತನು ಸಬ್ಬತ್‌ದಿನದಲ್ಲಿ ಸಭಾಮಂದಿರಕ್ಕೆ ಹೋದನು. ಯೇಸು ಓದುವುದಕ್ಕಾಗಿ ಎದ್ದುನಿಂತನು. 17 ಪ್ರವಾದಿಯಾದ ಯೆಶಾಯನ ಗ್ರಂಥವನ್ನು ಆತನಿಗೆ ಓದಲು ಕೊಡಲಾಗಿತ್ತು. ಯೇಸು ಆ ಪುಸ್ತಕವನ್ನು ತೆರೆದು ಈ ಭಾಗವನ್ನು ಓದಿದನು:

18 “ಪ್ರಭುವಿನ (ದೇವರ) ಆತ್ಮವು ನನ್ನಲ್ಲಿ ಇದೆ.
ಬಡಜನರಿಗೆ ಶುಭಸಂದೇಶವನ್ನು ತಿಳಿಸಲು ದೇವರು ನನ್ನನ್ನು ಅಭಿಷೇಕಿಸಿದ್ದಾನೆ.
ಪಾಪಕ್ಕೆ ಸೆರೆಯಾಳುಗಳಾಗಿರುವ ಜನರಿಗೆ ‘ನೀವು ಬಿಡುಗಡೆಯಾಗಿದ್ದೀರಿ’ ಎಂತಲೂ
    ಕುರುಡರಿಗೆ, ‘ನಿಮಗೆ ಮತ್ತೆ ಕಣ್ಣು ಕಾಣಿಸುವುದು’ ಎಂತಲೂ
ತಿಳಿಸುವುದಕ್ಕೆ ದೇವರು ನನ್ನನ್ನು ಕಳುಹಿಸಿದ್ದಾನೆ.
ದಬ್ಬಾಳಿಕೆಗೆ ಗುರಿಯಾದವರನ್ನು ಬಿಡಿಸುವುದಕ್ಕೂ
19     ಪ್ರಭುವಿನ ಶುಭವರ್ಷವನ್ನು ಪ್ರಕಟಿಸುವುದಕ್ಕೂ ದೇವರು ನನ್ನನ್ನು ಕಳುಹಿಸಿದ್ದಾನೆ.”(A)

20 ಈ ಭಾಗವನ್ನು ಓದಿದ ನಂತರ ಯೇಸು ಆ ಪುಸ್ತಕವನ್ನು ಮುಚ್ಚಿ ಸಭಾಮಂದಿರದ ಸೇವಕನ ಕೈಗೆ ಕೊಟ್ಟು ಕುಳಿತುಕೊಂಡನು. ಸಭಾಮಂದಿರದಲ್ಲಿದ್ದ ಪ್ರತಿಯೊಬ್ಬರು ಯೇಸುವನ್ನೇ ದೃಷ್ಟಿಸಿ ನೋಡುತ್ತಿದ್ದರು. 21 ಆಗ ಯೇಸು, ಅವರಿಗೆ, “ನಾನು ಇದೀಗ ಓದಿದ ಮಾತುಗಳನ್ನು ನೀವು ಕೇಳುತ್ತಿದ್ದಾಗಲೇ ಅವು ನಿಜವಾಗಿ ನೆರವೇರಿದವು!” ಎಂದು ಹೇಳಿದನು.

22 ಜನರೆಲ್ಲರೂ ಯೇಸುವನ್ನು ಹೊಗಳತೊಡಗಿದರು. ಅವರು ಆತನ ಇಂಪಾದ ಮಾತುಗಳಿಗೆ ಆಶ್ಚರ್ಯಪಟ್ಟು, “ಇವನು ಈ ರೀತಿ ಮಾತಾಡಲು ಹೇಗೆ ಸಾಧ್ಯ? ಇವನು ಯೋಸೇಫನ ಮಗನಲ್ಲವೇ?” ಎಂದು ಮಾತಾಡಿಕೊಂಡರು.

23 ಯೇಸು ಅವರಿಗೆ, “ನೀವಂತೂ ‘ವೈದ್ಯನೇ, ನಿನ್ನನ್ನೇ ವಾಸಿಮಾಡಿಕೊ’ ಎಂಬ ಗಾದೆಯನ್ನು ನನಗೆ ಹೇಳುತ್ತೀರಿ ಎಂಬುದು ನನಗೆ ಗೊತ್ತು. ‘ನೀನು ಕಪೆರ್ನೌಮಿನಲ್ಲಿ ಮಾಡಿದ ಕೆಲವು ಕಾರ್ಯಗಳ ಬಗ್ಗೆ ನಾವು ಕೇಳಿದ್ದೇವೆ. ಅದೇ ಕಾರ್ಯಗಳನ್ನು ನಿನ್ನ ಸ್ವಂತ ಊರಿನಲ್ಲಿ ಮಾಡು!’” ಎಂದು ಹೇಳಬೇಕೆಂದಿದ್ದೀರಿ. 24 ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಪ್ರವಾದಿ ತನ್ನ ಸ್ವಂತ ಊರಿನಲ್ಲಿ ಸ್ವೀಕೃತನಾಗುವುದಿಲ್ಲ.

25 “ನಾನು ಹೇಳುವುದು ಸತ್ಯ. ಎಲೀಯನ ಕಾಲದಲ್ಲಿ ಮೂರುವರೆ ವರ್ಷಗಳವರೆಗೆ ಇಸ್ರೇಲ್ ದೇಶದಲ್ಲಿ ಮಳೆ ಬೀಳಲಿಲ್ಲ. ದೇಶದ ಯಾವ ಕಡೆಯಲ್ಲಿಯೂ ಆಹಾರವಿರಲಿಲ್ಲ. ಆ ಸಮಯದಲ್ಲಿ ಇಸ್ರೇಲಿನಲ್ಲಿ ಅನೇಕ ವಿಧವೆಯರು ಇದ್ದರು. 26 ಆದರೆ ಎಲೀಯನನ್ನು ಬೇರೆ ಯಾವ ವಿಧವೆಯರ ಬಳಿಗೂ ಕಳುಹಿಸದೆ ಸಿದೋನ್ ದೇಶಕ್ಕೆ ಸೇರಿದ ಸರೆಪ್ತ ಊರಿನ ಒಬ್ಬ ವಿಧವೆಯ ಬಳಿಗೆ ಮಾತ್ರ ಕಳುಹಿಸಲಾಯಿತು.

27 “ಪ್ರವಾದಿಯಾದ ಎಲೀಷನ ಕಾಲದಲ್ಲಿ ಅನೇಕ ಕುಷ್ಠರೋಗಿಗಳು ಇಸ್ರೇಲಿನಲ್ಲಿ ವಾಸಿಸುತ್ತಿದ್ದರು. ಆದರೆ ಅವರಲ್ಲಿ ಯಾರಿಗೂ ವಾಸಿಯಾಗದೆ ಸಿರಿಯ ದೇಶದ ನಾಮಾನನೊಬ್ಬನಿಗೇ ವಾಸಿಯಾಯಿತು” ಎಂದು ಹೇಳಿದನು.

28 ಸಭಾಮಂದಿರದಲ್ಲಿದ್ದ ಜನರೆಲ್ಲರೂ ಈ ಮಾತುಗಳನ್ನು ಕೇಳಿ ಬಹಳವಾಗಿ ಕೋಪಗೊಂಡು 29 ಯೇಸುವನ್ನು ಪಟ್ಟಣದಿಂದ ಹೊರಗಟ್ಟಿದರು. ಆ ಪಟ್ಟಣವು ಒಂದು ಗುಡ್ಡದ ಮೇಲಿತ್ತು. ಅವರು ಯೇಸುವನ್ನು ಗುಡ್ಡದ ಅಂಚಿಗೆ ಕರೆದುಕೊಂಡು ಬಂದು ಕೆಳಕ್ಕೆ ತಳ್ಳಿಬಿಡಬೇಕೆಂದಿದ್ದರು. 30 ಆದರೆ ಯೇಸು ಅವರ ಮಧ್ಯದಲ್ಲಿ ಹಾದು ಹೊರಟುಹೋದನು.

Read full chapter