Add parallel Print Page Options

ಐದು ಸಾವಿರಕ್ಕಿಂತ ಹೆಚ್ಚು ಜನರಿಗೆ ಆಹಾರದಾನ

(ಮತ್ತಾಯ 14:13-21; ಮಾರ್ಕ 6:30-44; ಲೂಕ 9:10-17)

ತರುವಾಯ, ಯೇಸು ಗಲಿಲಾಯ ಸರೋವರವನ್ನು (ತಿಬೇರಿಯ ಸರೋವರ) ದಾಟಿ ಆಚೆಯ ದಡಕ್ಕೆ ಹೋದನು. ಅನೇಕ ಜನರು ಯೇಸುವನ್ನು ಹಿಂಬಾಲಿಸಿದರು. ಏಕೆಂದರೆ ಯೇಸು ರೋಗಿಗಳನ್ನು ಗುಣಪಡಿಸುವುದರ ಮೂಲಕ ತನ್ನ ಅಧಿಕಾರವನ್ನು ತೋರಿಸಿದ್ದನು. ಅವರೆಲ್ಲರೂ ಅದನ್ನು ನೋಡಿದ್ದರು. ಆಗ ಯೇಸು ಬೆಟ್ಟವನ್ನು ಹತ್ತಿ ತನ್ನ ಶಿಷ್ಯರ ಸಂಗಡ ಕುಳಿತುಕೊಂಡನು. ಯೆಹೂದ್ಯರ ಪಸ್ಕಹಬ್ಬವೂ ಬಹು ಸಮೀಪವಾಗಿತ್ತು.

ಯೇಸು ಕಣ್ಣೆತ್ತಿ ನೋಡಿದಾಗ, ತನ್ನ ಬಳಿಗೆ ಬರುತ್ತಿದ್ದ ಜನಸಮೂಹವನ್ನು ಕಂಡು ಫಿಲಿಪ್ಪನಿಗೆ, “ಈ ಜನರಿಗೆಲ್ಲಾ ಸಾಕಾಗುವಷ್ಟು ರೊಟ್ಟಿಯನ್ನು ನಾವು ಎಲ್ಲಿ ಕೊಂಡುಕೊಳ್ಳೋಣ?” ಎಂದು ಕೇಳಿದನು. (ಫಿಲಿಪ್ಪನನ್ನು ಪರೀಕ್ಷಿಸುವುದಕ್ಕಾಗಿ ಆತನು ಈ ಪ್ರಶ್ನೆಯನ್ನು ಕೇಳಿದನು. ತಾನು ಮಾಡಲಿದ್ದ ಕಾರ್ಯ ಯೇಸುವಿಗೆ ಮೊದಲೇ ತಿಳಿದಿತ್ತು.)

ಫಿಲಿಪ್ಪನು, “ಇಲ್ಲಿರುವ ಪ್ರತಿಯೊಬ್ಬರಿಗೆ ರೊಟ್ಟಿಯ ಒಂದು ತುಂಡನ್ನು ಕೊಡಬೇಕಾದರೆ, ಇನ್ನೂರು ದಿನಾರಿ ನಾಣ್ಯಗಳಾದರೂ[a] ಬೇಕು” ಎಂದು ಉತ್ತರಕೊಟ್ಟನು.

ಅಂದ್ರೆಯನೆಂಬ ಮತ್ತೊಬ್ಬ ಶಿಷ್ಯನು ಅಲ್ಲಿದ್ದನು. ಅಂದ್ರೆಯನು ಸೀಮೋನ್ ಪೇತ್ರನ ಸಹೋದರ. ಅಂದ್ರೆಯನು, “ಇಲ್ಲಿರುವ ಒಬ್ಬ ಹುಡುಗನ ಬಳಿ ಜವೆಗೋಧಿಯ ಐದು ರೊಟ್ಟಿಗಳಿವೆ ಮತ್ತು ಎರಡು ಚಿಕ್ಕ ಮೀನುಗಳಿವೆ. ಆದರೆ ಅವು ಈ ಜನಸಮೂಹಕ್ಕೆ ಸಾಕಾಗುವುದಿಲ್ಲ” ಎಂದು ಹೇಳಿದನು.

10 ಯೇಸು, “ಜನರಿಗೆ ಕುಳಿತುಕೊಳ್ಳಲು ಹೇಳಿರಿ” ಎಂದು ತಿಳಿಸಿದನು. ಆ ಸ್ಥಳದಲ್ಲಿ ಹುಲ್ಲು ಹುಲುಸಾಗಿ ಬೆಳೆದಿತ್ತು. ಅಲ್ಲಿ ಕುಳಿತುಕೊಂಡವರಲ್ಲಿ ಸುಮಾರು ಐದುಸಾವಿರ ಮಂದಿ ಗಂಡಸರಿದ್ದರು. 11 ಬಳಿಕ ಯೇಸು ಆ ರೊಟ್ಟಿಗಳನ್ನು ತೆಗೆದುಕೊಂಡು ಅವುಗಳಿಗಾಗಿ ದೇವರಿಗೆ ಸ್ತೋತ್ರಸಲ್ಲಿಸಿ, ಕುಳಿತುಕೊಂಡಿದ್ದ ಜನರಿಗೆ ಕೊಟ್ಟನು. ಆತನು ಮೀನುಗಳನ್ನು ಕೊಡುವಾಗಲೂ ಅದೇ ರೀತಿ ಮಾಡಿದನು. ಎಲ್ಲರೂ ತಮಗೆ ಬೇಕಾದಷ್ಟು ತಿಂದರು.

12 ಅವರೆಲ್ಲರೂ ಊಟ ಮಾಡಿ ತೃಪ್ತರಾದ ಮೇಲೆ ಯೇಸು ತನ್ನ ಶಿಷ್ಯರಿಗೆ, “ಉಳಿದುಹೋದ ರೊಟ್ಟಿ ಮತ್ತು ಮೀನುಗಳ ತುಂಡುಗಳನ್ನು ಒಟ್ಟುಗೂಡಿಸಿರಿ. ಯಾವುದನ್ನೂ ಹಾಳುಮಾಡಬೇಡಿ” ಎಂದು ಹೇಳಿದನು. 13 ಆದ್ದರಿಂದ ಶಿಷ್ಯರು ಉಳಿದುಹೋಗಿದ್ದ ತುಂಡುಗಳನ್ನು ಒಟ್ಟುಗೂಡಿಸಿದರು. ಜನರು ತಿನ್ನಲು ಆರಂಭಿಸಿದಾಗ ಕೇವಲ ಐದು ಜವೆಗೋದಿಯ ರೊಟ್ಟಿಗಳಿದ್ದವು. ಆದರೆ ಶಿಷ್ಯರು ಉಳಿದುಹೋದ ಆಹಾರದ ತುಂಡುಗಳನ್ನು ಒಟ್ಟುಗೂಡಿಸಿದಾಗ ಹನ್ನೆರಡು ದೊಡ್ಡ ಬುಟ್ಟಿಗಳು ತುಂಬಿಹೋದವು.

14 ಯೇಸು ಮಾಡಿದ ಈ ಸೂಚಕಕಾರ್ಯವನ್ನು ಕಂಡ ಜನರು, “ಈ ಲೋಕಕ್ಕೆ ಬರಲಿರುವ ಪ್ರವಾದಿ ನಿಜವಾಗಿಯೂ ಈತನೇ ಇರಬೇಕು” ಎಂದು ಹೇಳತೊಡಗಿದರು.

Read full chapter

Footnotes

  1. 6:7 ಇನ್ನೂರು ದಿನಾರಿ ನಾಣ್ಯ ಒಬ್ಬನಿಗೆ ದೊರೆಯುತ್ತಿದ್ದ ಒಂದು ವರ್ಷದ ಆದಾಯ.