Add parallel Print Page Options

ಐದು ಸಾವಿರಕ್ಕಿಂತ ಹೆಚ್ಚು ಜನರಿಗೆ ಆಹಾರದಾನ

(ಮತ್ತಾಯ 14:13-21; ಲೂಕ 9:10-17; ಯೋಹಾನ 6:1-14)

30 ಯೇಸು ಉಪದೇಶಿಸಲು ಕಳುಹಿಸಿದ್ದ ಅಪೊಸ್ತಲರು ಮರಳಿಬಂದು ತಾವು ಮಾಡಿದ ಮತ್ತು ಉಪದೇಶಿಸಿದ ಸಂಗತಿಗಳನ್ನೆಲ್ಲ ಆತನಿಗೆ ತಿಳಿಸಿದರು. 31 ಯೇಸು ಮತ್ತು ಆತನ ಶಿಷ್ಯರು ಜನರಿಂದ ತುಂಬಿದ ಸ್ಥಳದಲ್ಲಿದ್ದರು. ಅಲ್ಲಿ ಅನೇಕಾನೇಕ ಜನರಿದ್ದುದರಿಂದ ಯೇಸು ಮತ್ತು ಆತನ ಶಿಷ್ಯರಿಗೆ ಊಟಮಾಡಲು ಸಹ ಸಮಯವಿರಲಿಲ್ಲ. ಯೇಸು ತನ್ನ ಶಿಷ್ಯರಿಗೆ, “ನನ್ನೊಂದಿಗೆ ಬನ್ನಿ. ನಾವು ಪ್ರಶಾಂತವಾಗಿರುವ ಸ್ಥಳಕ್ಕೆ ಹೋಗಿ ಸ್ವಲ್ಪ ವಿಶ್ರಮಿಸಿಕೊಳ್ಳೋಣ” ಎಂದು ಹೇಳಿದನು.

32 ಆದ್ದರಿಂದ ಯೇಸು ಮತ್ತು ಆತನ ಶಿಷ್ಯರು ಜನರಿಲ್ಲದ ಸ್ಥಳಕ್ಕೆ ದೋಣಿಯಲ್ಲಿ ಪ್ರತ್ಯೇಕವಾಗಿ ಹೊರಟರು. 33 ಆದರೆ ಅವರು ಹೋಗುತ್ತಿರುವುದನ್ನು ಅನೇಕ ಜನರು ನೋಡಿದರು. ಆತನು ಯೇಸುವೆಂಬುದು ಅವರಿಗೆ ತಿಳಿದಿತ್ತು. ಆದ್ದರಿಂದ ಆತನು ಹೋಗುತ್ತಿರುವ ಸ್ಥಳಕ್ಕೆ ಎಲ್ಲಾ ಊರುಗಳಿಂದ ಜನರು ಓಡಿಹೋಗಿ, ಆತನು ಅಲ್ಲಿಗೆ ಬರುವುದಕ್ಕೆ ಮುಂಚೆಯೇ ಅಲ್ಲಿದ್ದರು. 34 ಯೇಸು ಅಲ್ಲಿಗೆ ಬಂದಾಗ, ಅನೇಕ ಜನರು ತನಗಾಗಿ ಕಾಯುತ್ತಿರುವುದನ್ನು ನೋಡಿದನು. ಅವರು ಕುರುಬನಿಲ್ಲದ ಕುರಿಗಳಂತೆ ಇರುವುದನ್ನು ಕಂಡು ದುಃಖಗೊಂಡು ಅವರಿಗೆ ಅನೇಕ ಸಂಗತಿಗಳನ್ನು ಉಪದೇಶಿಸಿದನು.

35 ಅಂದು ಬಹಳ ಹೊತ್ತಾಯಿತು. ಯೇಸುವಿನ ಶಿಷ್ಯರು ಆತನ ಬಳಿಗೆ ಬಂದು, “ಈ ಸ್ಥಳದಲ್ಲಿ ಯಾರೂ ವಾಸಿಸುತ್ತಿಲ್ಲ. ಈಗಾಗಲೇ ಬಹಳ ಹೊತ್ತಾಗಿದೆ. 36 ಆದ್ದರಿಂದ ಜನರನ್ನು ಕಳುಹಿಸಿಬಿಡು. ಅವರು ಸುತ್ತಮುತ್ತಲಿರುವ ತೋಟಗಳಿಗೂ ಪಟ್ಟಣಗಳಿಗೂ ಹೋಗಿ ಆಹಾರವನ್ನು ಕೊಂಡುಕೊಳ್ಳಲಿ” ಎಂದು ಹೇಳಿದರು.

37 ಆದರೆ ಯೇಸು, “ನೀವೇ ಅವರಿಗೆ ಊಟ ಕೊಡಿ” ಎಂದು ಉತ್ತರಕೊಟ್ಟನು.

ಶಿಷ್ಯರು ಯೇಸುವಿಗೆ, “ಈ ಜನರಿಗೆಲ್ಲ ಬೇಕಾಗುವಷ್ಟು ರೊಟ್ಟಿಯನ್ನು ನಾವು ಎಲ್ಲಿಂದ ತರೋಣ! ಅವರಿಗೆ ಬೇಕಾಗುವಷ್ಟು ರೊಟ್ಟಿಯನ್ನು ಕೊಂಡುಕೊಂಡು ಬರಬೇಕಾದರೆ ನಮಗೆ ಇನ್ನೂರು ದಿನಾರಿ ನಾಣ್ಯ[a] ಗಳಾದರೂ ಬೇಕು!” ಎಂದು ಹೇಳಿದರು.

38 ಯೇಸು ಶಿಷ್ಯರಿಗೆ, “ಈಗ ನಿಮ್ಮ ಬಳಿಯಲ್ಲಿ ಎಷ್ಟು ರೊಟ್ಟಿಗಳಿವೆ? ಹೋಗಿ ನೋಡಿ” ಎಂದು ಹೇಳಿದನು.

ಶಿಷ್ಯರು ಹೋಗಿ ರೊಟ್ಟಿಗಳನ್ನು ಎಣಿಸಿ ಬಂದು, “ನಮ್ಮ ಬಳಿ ಐದು ರೊಟ್ಟಿಗಳಿವೆ ಮತ್ತು ಎರಡು ಮೀನುಗಳಿವೆ” ಎಂದು ಹೇಳಿದರು.

39 ಆಗ ಯೇಸು ಶಿಷ್ಯರಿಗೆ, “ಹಸಿರು ಹುಲ್ಲಿನ ಮೇಲೆ ಸಾಲುಸಾಲಾಗಿ ಕುಳಿತುಕೊಳ್ಳಲು ಜನರಿಗೆ ತಿಳಿಸಿ” ಎಂದು ಹೇಳಿದನು. 40 ಅಂತೆಯೇ ಜನರೆಲ್ಲರೂ ಸಾಲುಸಾಲಾಗಿ ಕುಳಿತುಕೊಂಡರು. ಪ್ರತಿಯೊಂದು ಸಾಲಿನಲ್ಲಿಯೂ ಐವತ್ತರಿಂದ ನೂರು ಜನರಿದ್ದರು.

41 ಯೇಸು ಐದು ರೊಟ್ಟಿಗಳನ್ನು ಮತ್ತು ಎರಡು ಮೀನುಗಳನ್ನು ತೆಗೆದುಕೊಂಡು ಆಕಾಶದ ಕಡೆಗೆ ನೋಡಿ, ರೊಟ್ಟಿಗಾಗಿ ದೇವರಿಗೆ ಕೃತಜ್ಞತೆ ಸಲ್ಲಿಸಿದನು. ಬಳಿಕ ರೊಟ್ಟಿಯನ್ನು ಮುರಿದು, ಅದನ್ನು ಶಿಷ್ಯರಿಗೆ ಕೊಟ್ಟು ಜನರಿಗೆಲ್ಲ ಹಂಚಲು ತಿಳಿಸಿದನು. ಅಂತೆಯೇ ಎರಡು ಮೀನುಗಳನ್ನು ಮುರಿದು ಜನರಿಗೆ ಹಂಚಬೇಕೆಂದು ಶಿಷ್ಯರಿಗೆ ಕೊಟ್ಟನು.

42 ಜನರೆಲ್ಲರೂ ಊಟಮಾಡಿ ತೃಪ್ತರಾದರು. 43 ಬಳಿಕ ಜನರು ತಿನ್ನಲಾರದೆ ಉಳಿಸಿದ ರೊಟ್ಟಿ ಮತ್ತು ಮೀನುಗಳನ್ನು ಶಿಷ್ಯರು ಶೇಖರಿಸಿದಾಗ ಹನ್ನೆರಡು ಬುಟ್ಟಿಗಳು ತುಂಬಿಹೋದವು. 44 ಅಂದು ಸುಮಾರು ಐದು ಸಾವಿರ ಜನ ಊಟಮಾಡಿದರು.

Read full chapter

Footnotes

  1. 6:37 ಇನ್ನೂರು ದಿನಾರಿ ನಾಣ್ಯ ಒಬ್ಬನಿಗೆ ದೊರೆಯುತ್ತಿದ್ದ ಒಂದು ವರ್ಷದ ಆದಾಯ.