Add parallel Print Page Options

ಸತ್ತುಹೋಗಿದ್ದ ಹುಡುಗಿಗೆ ಜೀವದಾನ ಮತ್ತು ಕಾಯಿಲೆಯ ಸ್ತ್ರೀಗೆ ಆರೋಗ್ಯದಾನ

(ಮತ್ತಾಯ 9:18-26; ಮಾರ್ಕ 5:21-43)

40 ಯೇಸು ಗಲಿಲಾಯಕ್ಕೆ ಹಿಂತಿರುಗಿದಾಗ ಜನರು ಆತನನ್ನು ಸ್ವಾಗತಿಸಿದರು. ಪ್ರತಿಯೊಬ್ಬರೂ ಆತನಿಗಾಗಿ ಕಾಯುತ್ತಿದ್ದರು. 41 ಯಾಯಿರನೆಂಬ ಒಬ್ಬ ಮನುಷ್ಯನು ಯೇಸುವಿನ ಬಳಿಗೆ ಬಂದನು. ಅವನು ಸಭಾಮಂದಿರದ ಅಧಿಕಾರಿಯಾಗಿದ್ದನು. ಅವನು ಯೇಸುವಿನ ಪಾದಗಳಿಗೆ ಅಡ್ಡಬಿದ್ದು ತನ್ನ ಮನೆಗೆ ಬರಬೇಕೆಂದು ಬೇಡಿಕೊಂಡನು. 42 ಅವನಿಗೆ ಒಬ್ಬಳೇ ಮಗಳಿದ್ದಳು. ಆಕೆಗೆ ಹನೆರಡು ವರ್ಷ ವಯಸ್ಸಾಗಿತ್ತು. ಆಕೆಯು ಸಾಯುವ ಸ್ಥಿತಿಯಲ್ಲಿದ್ದಳು.

ಯೇಸುವು ಯಾಯಿರನ ಮನೆಗೆ ಹೋಗುತ್ತಿದ್ದಾಗ ಜನರು ಆತನ ಸುತ್ತಲೂ ಸೇರಿಬಂದರು. 43 ಹನ್ನೆರಡು ವರ್ಷಗಳಿಂದ ರಕ್ತಸ್ರಾವವಾಗುತ್ತಿದ್ದ ಸ್ತ್ರೀಯೊಬ್ಬಳು ಅಲ್ಲಿದ್ದಳು. ಆಕೆ ತನ್ನಲ್ಲಿದ್ದ ಹಣವನ್ನೆಲ್ಲಾ ವೈದ್ಯರಿಗೆ ಖರ್ಚು ಮಾಡಿದ್ದಳು. ಆದರೆ ಯಾವ ವೈದ್ಯನಿಗೂ ಆಕೆಯನ್ನು ವಾಸಿಮಾಡಲು ಸಾಧ್ಯವಾಗಿರಲಿಲ್ಲ. 44 ಆ ಸ್ತ್ರೀಯು ಯೇಸುವಿನ ಹಿಂದೆ ಬಂದು ಆತನ ನಿಲುವಂಗಿಯ ಕೆಳಭಾಗವನ್ನು ಮುಟ್ಟಿದಳು. ಆ ಕ್ಷಣವೇ ಆಕೆಯ ರಕ್ತಸ್ರಾವ ನಿಂತುಹೋಯಿತು. 45 ಆಗ ಯೇಸು, “ನನ್ನನ್ನು ಮುಟ್ಟಿದವರು ಯಾರು?” ಎಂದು ಕೇಳಿದನು.

ಜನರೆಲ್ಲರೂ ತಾವು ಮುಟ್ಟಲಿಲ್ಲವೆಂದು ಹೇಳುತ್ತಿರಲು ಪೇತ್ರನು, “ಗುರುವೇ, ಇಷ್ಟೊಂದು ಜನರು ಮೇಲೆ ಬೀಳುತ್ತಾ ನಿನ್ನನ್ನು ನೂಕುತ್ತಿದ್ದಾರಲ್ಲಾ” ಎಂದನು.

46 ಅದಕ್ಕೆ ಯೇಸು, “ಯಾರೋ ಒಬ್ಬರು ನನ್ನನ್ನು ಮುಟ್ಟಿದರು! ನನ್ನಿಂದ ಶಕ್ತಿ ಹೊರಟದ್ದು ನನಗೆ ತಿಳಿಯಿತು” ಎಂದು ಹೇಳಿದನು. 47 ಇನ್ನು ತಾನು ಅಡಗಿಕೊಂಡಿರಲು ಸಾಧ್ಯವಿಲ್ಲವೆಂದು ತಿಳಿದುಕೊಂಡ ಆ ಸ್ತ್ರೀಯು ನಡುಗುತ್ತಾ ಆತನ ಮುಂದೆ ಬಂದು ಅಡ್ಡಬಿದ್ದು ತಾನು ಮುಟ್ಟಿದ್ದಕ್ಕೆ ಕಾರಣವನ್ನು ಎಲ್ಲರ ಎದುರಿನಲ್ಲಿ ತಿಳಿಸಿದಳು. ಅಲ್ಲದೆ ಆತನನ್ನು ಮುಟ್ಟಿದಾಕ್ಷಣವೇ ತನಗೆ ವಾಸಿಯಾಯಿತೆಂದು ಹೇಳಿದಳು. 48 ಯೇಸು ಆಕೆಗೆ, “ಮಗಳೇ, ನೀನು ನಂಬಿದ್ದರಿಂದ ನಿನಗೆ ಸ್ವಸ್ಥವಾಯಿತು. ಸಮಾಧಾನದಿಂದ ಹೋಗು” ಎಂದು ಹೇಳಿದನು.

49 ಯೇಸು ಇನ್ನೂ ಮಾತನಾಡುತ್ತಿದ್ದಾಗ ಸಭಾಮಂದಿರದ ಅಧಿಕಾರಿಯ (ಯಾಯಿರನ) ಮನೆಯಿಂದ ಒಬ್ಬ ವ್ಯಕ್ತಿ ಬಂದು, “ನಿನ್ನ ಮಗಳು ಸತ್ತುಹೋದಳು! ಈಗ ಬೋಧಕನಿಗೆ (ಯೇಸುವಿಗೆ) ತೊಂದರೆ ಕೊಡಬೇಡ” ಎಂದು ಹೇಳಿದನು.

50 ಯೇಸು ಇದನ್ನು ಕೇಳಿ ಯಾಯಿರನಿಗೆ, “ಭಯಪಡಬೇಡ. ನಂಬಿಕೆಯೊಂದಿರಲಿ. ನಿನ್ನ ಮಗಳಿಗೆ ಗುಣವಾಗುವುದು” ಎಂದು ಹೇಳಿದನು.

51 ಯೇಸು ಯಾಯಿರನ ಮನೆಗೆ ಹೋದನು. ಪೇತ್ರ, ಯೋಹಾನ, ಯಾಕೋಬ ಮತ್ತು ಹುಡುಗಿಯ ತಂದೆತಾಯಿಗಳಿಗೆ ಮಾತ್ರ ತನ್ನೊಂದಿಗೆ ಬರಲು ಅನುಮತಿಕೊಟ್ಟನು. ಬೇರೆ ಯಾರೂ ಒಳಗೆ ಬರಕೂಡದೆಂದು ಯೇಸು ತಿಳಿಸಿದನು. 52 ಸತ್ತುಹೋದ ಆ ಬಾಲಕಿಗಾಗಿ ಜನರೆಲ್ಲರೂ ದುಃಖದಿಂದ ಗೋಳಾಡುತ್ತಿದ್ದರು. ಆದರೆ ಯೇಸು ಅವರಿಗೆ, “ಅಳಬೇಡಿ, ಆಕೆ ಸತ್ತಿಲ್ಲ; ನಿದ್ರಿಸುತ್ತಿದ್ದಾಳೆ” ಎಂದನು.

53 ಆಗ ಜನರು ಯೇಸುವನ್ನು ಗೇಲಿಮಾಡಿದರು. ಏಕೆಂದರೆ ಆ ಹುಡುಗಿ ಸತ್ತುಹೋದಳೆಂದು ಅವರಿಗೆ ಖಂಡಿತವಾಗಿ ತಿಳಿದಿತ್ತು. 54 ಆದರೆ ಯೇಸು ಆಕೆಯ ಕೈಯನ್ನು ಹಿಡಿದು, “ಮಗು, ಎದ್ದೇಳು!” ಎಂದನು. 55 ಆ ಕೂಡಲೇ ಆಕೆಗೆ ಜೀವ ಬಂದಿತು. ಆಕೆ ಎದ್ದುನಿಂತುಕೊಂಡಳು. ಯೇಸು ಅವರಿಗೆ, “ಆಕೆಗೆ ತಿನ್ನಲು ಏನಾದರೂ ಕೊಡಿರಿ” ಎಂದು ಹೇಳಿದನು. 56 ಬಾಲಕಿಯ ತಂದೆತಾಯಿಗಳು ಬೆರಗಾದರು. ಈ ಘಟನೆಯ ಬಗ್ಗೆ ಯಾರಿಗೂ ತಿಳಿಸಬಾರದೆಂದು ಯೇಸು ಅವರಿಗೆ ಆಜ್ಞಾಪಿಸಿದನು.

Read full chapter