ಮತ್ತಾಯ 9:18-26
Kannada Holy Bible: Easy-to-Read Version
ಮರುಜೀವ ಹೊಂದಿದ ಬಾಲಕಿ ಮತ್ತು ಗುಣಮುಖಳಾದ ಸ್ತ್ರೀ
(ಮಾರ್ಕ 5:21-43; ಲೂಕ 8:40-56)
18 ಯೇಸು ಈ ಸಂಗತಿಗಳನ್ನು ಹೇಳುತ್ತಿರುವಾಗ ಸಭಾಮಂದಿರದ ಅಧಿಕಾರಿಯೊಬ್ಬನು ಆತನ ಬಳಿಗೆ ಬಂದು ಆತನಿಗೆ ಬಾಗಿ ನಮಸ್ಕರಿಸಿ, “ನನ್ನ ಮಗಳು ಈಗ ತಾನೇ ಸತ್ತುಹೋದಳು. ನೀನು ಬಂದು ಅವಳನ್ನು ಮುಟ್ಟಿದರೆ ಅವಳು ಮತ್ತೆ ಜೀವಂತಳಾಗುವಳು” ಎಂದು ಹೇಳಿದನು.
19 ಆದ್ದರಿಂದ ಯೇಸು ಎದ್ದು ಅಧಿಕಾರಿಯ ಸಂಗಡ ಹೋದನು. ಯೇಸುವಿನ ಶಿಷ್ಯರು ಸಹ ಹೋದರು.
20 ಹನ್ನೆರಡು ವರ್ಷಗಳಿಂದ ರಕ್ತಸ್ರಾವ ಕಾಯಿಲೆ ಹೊಂದಿದ್ದ ಒಬ್ಬ ಹೆಂಗಸು ಅಲ್ಲಿದ್ದಳು. ಆ ಹೆಂಗಸು ಯೇಸುವಿನ ಹಿಂದೆಯೇ ಬಂದು ಆತನ ಮೇಲಂಗಿಯ ತುದಿಯನ್ನು ಮುಟ್ಟಿದಳು. 21 ಆ ಹೆಂಗಸು, “ನಾನು ಆತನ ಅಂಗಿಯನ್ನು ಮುಟ್ಟಿದರೆ ಸಾಕು, ನಾನು ಗುಣವಾಗಬಲ್ಲೆ” ಎಂದು ಆಲೋಚನೆ ಮಾಡಿಕೊಂಡಿದ್ದಳು.
22 ಯೇಸು ಹಿಂತಿರುಗಿ ಆ ಹೆಂಗಸನ್ನು ನೋಡಿ, “ಮಗಳೇ, ಸಂತೋಷಪಡು! ನಿನ್ನ ನಂಬಿಕೆಯಿಂದಲೇ ನಿನಗೆ ಗುಣವಾಯಿತು” ಎಂದು ಹೇಳಿದನು. ಆಗ ಅವಳು ಗುಣಮುಖಳಾದಳು.
23 ಬಳಿಕ ಯೇಸು ಅಧಿಕಾರಿಯೊಡನೆ ಮುಂದೆ ಸಾಗಿ ಅವನ ಮನೆಯೊಳಕ್ಕೆ ಹೋದನು. ಶವಸಂಸ್ಕಾರಕ್ಕಾಗಿ ಬಂದಿದ್ದ ವಾದ್ಯವೃಂದದವರಿಗೂ ಗೋಳಾಡುತ್ತಿದ್ದವರಿಗೂ ಯೇಸು, 24 “ದೂರ ಹೋಗಿರಿ, ಹುಡುಗಿ ಸತ್ತಿಲ್ಲ. ಅವಳು ನಿದ್ದೆ ಮಾಡುತ್ತಿದ್ದಾಳೆ” ಅಂದನು. ಆದರೆ ಅವರು ಯೇಸುವನ್ನು ಅಪಹಾಸ್ಯ ಮಾಡಿದರು. 25 ಜನರನ್ನು ಮನೆಯ ಹೊರಗೆ ಕಳುಹಿಸಿದ ಮೇಲೆ ಯೇಸು ಹುಡುಗಿಯ ಕೋಣೆಯ ಒಳಗೆ ಹೋದನು. ಯೇಸು ಹುಡುಗಿಯ ಕೈಯನ್ನು ಹಿಡಿದಾಗ ಆ ಹುಡುಗಿಯು ಎದ್ದುನಿಂತಳು. 26 ಈ ಸುದ್ದಿಯು ಸುತ್ತಮುತ್ತಲಿನ ಪ್ರದೇಶದಲ್ಲೆಲ್ಲಾ ಹಬ್ಬಿತು.
Read full chapterKannada Holy Bible: Easy-to-Read Version. All rights reserved. © 1997 Bible League International